ಕುಟ್ಟೆಹುಳು, ಹಿಟ್ಟಿನ

  ಬೂಸ, ಹಿಟ್ಟು, ರವೆ, ಅಟ್ಟ, ಮೈದ, ನುಚ್ಚು ಮುಂತಾದ ಒಡೆದ ಮತ್ತು ಬೀಸಿದ ಆಹಾರಧಾನ್ಯಗಳಿಗೆ ಬೀಳುವ ಕೀಟ (ಫ್ಲೋರ್ ಬೀಟಲ್). ದ್ವಿದಳಧಾನ್ಯಗಳ ನುಚ್ಚು. ಹಿಟ್ಟಿಗೂ ಬೀಳುವುದುಂಟು, ಉಂಡೆ ಕಾಳುಗಳಿಗೆ, ಬೇಳೆಗಳಿಗೆ ಸಾಮಾನ್ಯವಾಗಿ ಇವುಗಳ ಕಾಟವಿಲ್ಲ. ಧಾನ್ಯಗಳನ್ನು ಬೀಸುವ ಕಾರ್ಖಾನೆಗಳಲ್ಲೂ ಬೀಸಿದ ವಸ್ತುಗಳನ್ನು ದಾಸ್ತಾನು ಮಾಡುವ ಉಗ್ರಾಣಗಳಲ್ಲೂ ಇವುಗಳ ಹಾವಳಿ ವಿಶೇಷ. ಇವು ಕೋಲಿಯಾಪ್ಟಿರ ಗಣದ ಟೆನಿಬ್ರಯಾನಿಡೀ ಕುಲದ ಟ್ರೈಬೋಲಿಯಂ ಕ್ಯಾಸ್ಟೇನಿಯಂ ಹಾಗೂ ಟ್ರೈ ಕನ್ಫ್ಯೂಸಂ ಪ್ರಭೇದಗಳಿಗೆ ಸೇರಿವೆ. ಪ್ರಾಯದ ಕೀಟ ಇಟ್ಟಿಗೆ ಬಣ್ಣದ, ಚಪ್ಪಟೆಯಾದ ಬಹಳ ಚಟುವಟಿಕೆಯಿಂದ ಕೂಡಿದ ಸುಮಾರು 1/6" ಉದ್ದದ ಚಿಪ್ಪಿನ ಕೀಟ. ತಾಯಿಕೀಟ ಸುಮಾರು 1000 ಮೊಟ್ಟೆಗಳನ್ನು ಆಹಾರ ಸಾಮಗ್ರಿಯೊಳಗೆ ಇಡುತ್ತದೆ. ಮರಿಹುಳುಗಳು ತೆಳ್ಳನೆ ತಂತಿ ತುಂಡಿನಂತಿರುತ್ತವೆ; ಬೆಳೆದ ಹಾಗೆ ಇವು ಹಳದಿ ವರ್ಣಕ್ಕೆ ತಿರುಗುತ್ತವೆ. ಇವು ಸುಮಾರು 3/16" ದಷ್ಟು ಉದ್ದ ಬೆಳೆಯುತ್ತವೆ. ಒಂದು ತಲೆಮಾರಿನ ಜೀವಾವಧಿ 4-6 ವಾರ; ವರ್ಷಕ್ಕೆ 6-8 ತಲೆಮಾರುಗಳು. ಹುಳುಬಿದ್ದ ಹಿಟ್ಟು ವಗೈರೆಯನ್ನು ಜರಡಿಯಾಡಿ ಮರಿ, ಪ್ರಾಯಕೀಟಗಳನ್ನು ಬೇರ್ಪಡಿಸಬಹುದೇ ಹೊರತು ಮೊಟ್ಟೆ, ಪಿಚಿಕೆಗಳನ್ನು ಬೇರೆ ಮಾಡಲು ಸಾಧ್ಯವಿಲ್ಲ. ಈ ಕಾರಣದಿಂದ ಹುಳು ಬಿದ್ದ ಆಹಾರಕ್ಕೆ ಮುಗ್ಗಲು ವಾಸನೆ, ಒಗರು ರುಚಿ ಬರುತ್ತದೆ. ಆದ್ದರಿಂದ ಬೀಸುವ ಕಾರ್ಖಾನೆ ಮತ್ತು ಉಗ್ರಾಣಗಳನ್ನು ನಿಯಮಾನುಸಾರ ಶುಚಿಪಡಿಸಿ ಈ ಕೀಟಗಳ ಪ್ರವೇಶವನ್ನು ತಡೆಗಟ್ಟುವುದು ಉತ್ತಮ.

 

(ಡಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ